ಮಾಲಾವತೀ ಕಾಲಪುರುಷ ಸಂವಾದ
ಮಾಲಾವತಿ, ನಿನ್ನ ಪತಿ ಯಾವ ರೋಗದಿಂದ ಸತ್ತನೆಂದು ಹೇಳು. ನಾನು ವೈದ್ಯ. ಎಲ್ಲ ರೋಗಗಳಿಗೂ ಚಿಕಿತ್ಸೆಯನ್ನು ನಾನು ಬಲ್ಲೆ. ಸಾಯುತ್ತಿರುವವನನ್ನಾಗಲಿ ಸತ್ತವನನ್ನಾಗಲಿ ಒಂದು ವಾರದೊಳಗೆ ದಿವ್ಯಜ್ಞಾನದಿಂದ ಅನಾಯಾಸವಾಗಿ ಬದುಕಿಸಬಲ್ಲೆ. ಬೇಡನು ಮೃಗಗಳನ್ನು ಹಿಡಿದು ತರುವಂತೆ ಮೃತ್ಯು ಯಮ ಕಾಲ ವ್ಯಾಧಿಗಳನ್ನೂ ಹಿಡಿದುತಂದು ನಿನ್ನ ಮುಂದೆ ನಿಲ್ಲಿಸಬಲ್ಲೆ. ವ್ಯಾಧಿ ಶರೀರದಲ್ಲಿ ಸಂಚರಿಸದಂತೆ ಮಾಡುವುದು ಹೇಗೆ, ವ್ಯಾಧಿ ಹುಟ್ಟಲು ಕಾರಣವೇನು, ವ್ಯಾಧಿ ಕಾರಣವಾದ ದೋಷಗಳು ಶರೀರದಲ್ಲಿ ಸಂಚರಿಸದಂತೆ ಮಾಡುವುದು ಹೇಗೆ ? ಎಂಬುದನ್ನೆಲ್ಲ ಶಾಸ್ತಾನುಸಾರ ಬಲ್ಲೆ. ಒಬ್ಬನು ದುಃಖಿತನಾಗಿ ಯೋಗಬಲದಿಂದ ದೇಹ, ತ್ಯಾಗ ಮಾಡುತ್ತಿದ್ದರೆ ಅವನಿಗೆ ಯೋಗ ಧರ್ಮಾನುಸಾರ ಜೀವನೋಪಾಯ ತಿಳಿಸಲೂ ಬಲ್ಲೆ, - ಬ್ರಾಹ್ಮಣ ಬಾಲಕನ ಮಾತು ಕೇಳಿ ಮಾಲಾವತಿ ನಸುನಕ್ಕು ಭಕ್ತಿಯಿಂದ ನುಡಿದಳು- 'ಆಶ್ಚರ್ಯ! ಬಾಲಕನ ಮುಖದಿಂದ ಎಂಥ ಮಾತನ್ನು ಕೇಳುತ್ತಿದ್ದೇನೆ! ವಯಸ್ಸಿನಲ್ಲಿ ಬಾಲಕನಾದರೂ ಹಿರಿಯ ಯೋಗವೇತ್ತರ ಜ್ಞಾನ ಭಂಡಾರ ಆ ಮಾತಿನಲ್ಲಿ ತುಂಬಿದೆ. ಬ್ರಹ್ಮಚಾರಿ, ನೀನು ನನ್ನ ಪತಿಯನ್ನು ಬದುಕಿಸಿಕೊಡುವೆನೆಂದು ಮಾತು ಕೊಟ್ಟಿರುವಿ. ಸತ್ಪುರುಷರು ಮಾತುಕೊಟ್ಟರೆ ಅದು ಸುಳ್ಳಾಗುವುದಿಲ್ಲ. ಇನ್ನೇನು ? ಪತಿ ಬದುಕಿ ಬಂದನೆಂದೇ ತಿಳಿಯುತ್ತೇನೆ.
ಬ್ರಹ್ಮಚಾರಿ, ನೀನು ನನ್ನ ಪತಿಯನ್ನು ಬದುಕಿಸು, ಆದರೆ ಮೊದಲಿಗೆ ನಾನು ನನ್ನ ಕೆಲವು ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ. ಪತಿ ಬದುಕಿ ಬಂದಮೇಲೆ ಆ ಸಂದೇಹಗಳನ್ನು ಅವನೆದುರಿನಲ್ಲಿ ಅವನೇನಾದರೂ ವಿರೋಧಿಸಿದರೆ, ದೇವತೆಗಳ ಮುಂದೆ ಇಡಲಾರೆ. ಏಕೆಂದರೆ ಪತಿ ಪತ್ನಿಯನ್ನು ರಕ್ಷಿಸುತ್ತಿದ್ದರೆ ಅವಳನ್ನು ಬಾಧಿಸಲು ಯಾರೂ ಶಕ್ತರಲ್ಲ. ಪತಿ ಶಿಕ್ಷಿಸುತ್ತಿದ್ದರೆ ಅದನ್ನು ತಪ್ಪಿಸಲೂ ಯಾರೂ ಸಮರ್ಥನಲ್ಲ. ದೇವತೆಗಳಲ್ಲಿಯೂ ಹೀಗೇ ನಿಯಮ.
ಪತಿಯ ಇಚ್ಛೆಗೆ ವಿರುದ್ಧವಾಗಿ ಸತಿಯನ್ನು ರಕ್ಷಿಸುವ ಅಥವಾ ಶಿಕ್ಷಿಸುವ ಶಕ್ತಿ ಇಂದ್ರನಿಗೂ ಇಲ್ಲ. ಬ್ರಹ್ಮ ರುದ್ರರಿಗೂ ಇಲ್ಲ. ಪತಿ ಪತ್ನಿಯರ ಸಂಬಂಧವೆ ಹೀಗೆ. - ಸತಿಗೆ ರಕ್ಷಕ, ಶಿಕ್ಷಕ, ಪೋಷಕ, ಪೂಜ್ಯ ಗುರು ಎಲ್ಲ ಪತಿಯೆ. ಸತ್ಕುಲದಿಂದ ಬಂದಹೆಣ್ಣು ಪತಿಗೆ ಅನುವರ್ತಿಯಾಗಿರುತ್ತಾಳೆ. ಯಾರು ಸೈಜ್ಞಾನುಸಾರ ವರ್ತಿಸುವಳೋ ಅವಳು ಸ್ವಭಾವದಲ್ಲಿಯ ಕೆಟ್ಟವಳು. ಅವಳು ಪರಪುರುಷರನ್ನು ಸೇರುವಳು. ಪತಿಯನ್ನು ನಿಂದಿಸುವಳು. ನಾನು ಪತಿಯಲ್ಲಿ ಸದಾ ಭಕ್ತಿ ಇರಿಸಿದವಳು. ನೀನು ಹೇಳಿದಂತೆ ಕಾಲ ಯಮ ಮೃತ್ಯು ಕನೈಯರನ್ನು ಹಿಡಿದು ತರಬಲ್ಲೆಯಾದರೆ ಹಾಗೇ ಮಾಡು, ನನ್ನ ಮುಂದೆ ತಂದು ಅವರನ್ನು ನಿಲ್ಲಿಸು.'
ಬ್ರಾಹ್ಮಣ ಬಾಲಕ ಕಾಲ ಯಮ ಮೃತ್ಯುಕನೈಯರನ್ನು ತಂದು ಸಭೆಯಲ್ಲಿ ಮಾಲಾವತಿಯ ಮುಂದೆ ನಿಲ್ಲಿಸಿದ. ಮಾಲಾವತಿ ಮೊದಲಿಗೆ ಮೃತ್ಯುಕನೈಯನ್ನು ಕಂಡಳು. ಅವಳು ತನ್ನ ಪತಿಯಾದ ಕಾಲನ ಎಡಭಾಗದಲ್ಲಿ ಅರವತ್ತ ನಾಲ್ಕು ಮಂದಿ ಮಕ್ಕಳ ಜೊತೆಗೆ ನಿಂತಿದ್ದಳು. ಕಪ್ಪು ಬಣ್ಣದ ಮೈಯವಳು. ಕೆಂಪುಬಟ್ಟೆ ಉಟ್ಟಿದ್ದಳು. ಆರು ಕೈಗಳ ಭಯಂಕರ ರೂಪ. ಆದರೂ ಶಾಂತಳಾಗಿ ದಯಾಯುಕ್ತಳಾಗಿ ನಸುನಗುತ್ತ ನಿಂತಿದ್ದಳು.
ಬಳಿಕ ಮಾಲಾವತಿ ನಾರಾಯಣಾಂಶ ಸಂಭೂತನಾದ ಕಾಲನನ್ನು ಕಂಡಳು. ಆತ ಶ್ರೇಷ್ಟಕಾಲದ ಮಧ್ಯಾಹ್ನ ಸೂರ್ಯನಂಥ ಪ್ರಖರ ತೇಜಸ್ಸಿನವ. ಮಹಾ ಭಯಂಕರ ರೂಪದವ, ಆರು ಮುಖ. ಇಪ್ಪತ್ತನಾಲ್ಕು ಕಣ್ಣು, ಆರು ಕಾಲು, ಹದಿನಾರು ಕೈ ಕಪ್ಪು ಬಣ್ಣದ ಮೈ, ಕೆಂಪುಬಟ್ಟೆ ಉಟ್ಟಿದ್ದಾನೆ. ವಿಕೃತಾಕಾರದವ.
ಸರ್ವಸಂಹಾರಕ, ದೇವದೇವ, ಸರ್ವೆಶ್ವರ, ಮಂದಹಾಸ ಸೂಸುವ ಪ್ರಸನ್ನ ಮುಖನಾಗಿ ಅಕ್ಷಮಾಲೆ ಹಿಡಿದು ತನ್ನ ಸ್ವರೂಪವೆ ಆದ ಪರಬ್ರಹ್ಮ ಕೃಷ್ಣಪರಮಾತ್ಮನನ್ನು ಕುರಿತು ಜಪಿಸುತ್ತಿದ್ದ.
ಬಳಿಕ ಮಾಲಾವತಿ ಅರವತ್ತನಾಲ್ಕು ವ್ಯಾಧಿಗಳನ್ನು ಕಂಡಳು. ಅವರೆಲ್ಲ ವಯಸ್ಸಿನಿಂದ ಅತ್ಯಂತ ವೃದ್ಧರಾದರೂ ಮಾತೆಯ ಸ್ತನಪಾನ ಮಾಡುವ ಶಿಶುಗಳಾಗಿದ್ದರು.
ಬಳಿಕ ಮಾಲಾವತಿ ಯಮನನ್ನು ಕಂಡಳು. ಅವನಿಗೆ ದೊಡ್ಡ ಪಾದಗಳು, ಕರಿಬಣ್ಣದ ಮೈ, ಧರ್ಮಿಷ್ಟ ಧರ್ಮಸ್ವರೂಪ, ಧರ್ಮಾಧರ್ಮ ವಿಚಾರವೆಲ್ಲ ಬಲ್ಲವ. ಪಾಪಿಗಳಿಗೆ ಶಿಕ್ಷೆ ಕೊಡುವವ. ಪರಬ್ರಹ್ಮ ಸನಾತನ ಭಗವಂತನನ್ನು ಕುರಿತು ಜಪಿಸುತ್ತಿದ್ದ.
ಎಲ್ಲರನ್ನೂ ಕಂಡು ನಿಶಂಕೆಯಿಂದ ಮೊದಲಿಗೆ ಯಮನನ್ನು ಪ್ರಶ್ನಿಸಿದಳು ಮಾಲಾವತಿ. ಅವಳ ಕಣ್ಣು ಮುಖಗಳು ಪ್ರಸನ್ನವಾಗಿದ್ದುವು.
'ಹೇ ಧರ್ಮರಾಜ, ನೀನು ಧರ್ಮಿಷ್ಟ ಧರ್ಮಶಾಸ್ತ್ರ ವಿಶಾರದ, ಅಕಾಲದಲ್ಲಿ ನನ್ನ ಪತಿಯನ್ನೇಕೆ ಸೆಳೆದೊಯ್ದ ?'
ಯಮನೆಂದ, 'ಮಾಲಾವತಿ, ಯಾರೂ ಕಾಲ ಬಾರದೆ ಮರಣ ಹೊಂದುವುದಿಲ್ಲ. ಪರಮಾತ್ಮನ ಆಜ್ಞೆಯಿಲ್ಲದೆ ಜೀವಂತನಾದ ವ್ಯಕ್ತಿಯನ್ನು ನಾನೆಂದೂ ಸೆಳೆಯುವುದಿಲ್ಲ.
ನಾನು, ಕಾಲ, ಮೃತ್ಯುಕಸ್ಯೆ, ವ್ಯಾಧಿಗಳು ಎಲ್ಲರೂ ಜೀವಿಗಳ ಗರ್ಭೋತ್ಪತ್ತಿಯಿಂದ ತೊಡಗಿ ಆಯುಸ್ಸನ್ನು ಗಣಿಸುತ್ತಲೆ ಇರುತ್ತೇವೆ. ನಮಗೆ ಹಾಗೆ ಪರಮಾತ್ಮನ ಆಜ್ಞೆ ಇದೆ. ವಿಚಾರಜ್ಞಳಾದ ಮೃತ್ಯುಕಸ್ಯೆ ಯಾವ ವ್ಯಕ್ತಿಯನ್ನು ಸೇರುವಳೋ ಆ ವ್ಯಕ್ತಿಯನ್ನು ನಾನು ಸೆಳೆದೊಯ್ಯುತ್ತೇನೆ.'
ಮಾಲಾವತಿ ಮೃತ್ಯುಕಸ್ಯೆಯನ್ನು ಕೇಳಿದಳು- 'ಹೇ ಮೃತ್ಯುಕಸ್ಯೆ, ನೀನೂ ಒಬ್ಬಳು ಸ್ತ್ರೀಯೆ. ಪತಿಶೋಕವೆಂದರೇನೆಂಬುದನ್ನು ಅರಿಯಬಲ್ಲವಳು. ನೀನೆ ಹೇಳು. ನಾನಿನ್ನೂ ಬದುಕಿರುವಾಗ ನನ್ನ ಪತಿಯನ್ನು ನೀನು ಹೇಗೆ ಸೆಳೆದೊಯ್ದೆ ?”
ಮೃತ್ಯುಕಸ್ಯೆ ಹೇಳಿದಳು, 'ಮಾಲಾವತಿ, ನಾನೇನು ಮಾಡಲಿ ? ಹಿಂದೆ ಬ್ರಹ್ಮನು ಈ ಕೆಲಸಕ್ಕಾಗಿಯೇ ನನ್ನನ್ನು ಹುಟ್ಟಿಸಿದ್ದಾನೆ. ಎಷ್ಟು ತಪಸ್ಸು ಮಾಡಿದರೂ ನಾನೀ ಕೆಲಸವನ್ನು ತಪ್ಪಿಸಿಕೊಳ್ಳಲಾರದಾದೆ. ಪತಿವ್ರತೆಯಲ್ಲಿ ಯಾರಾದರೂ ಒಬ್ಬಳು ತೇಜಸ್ವಿನಿಯಾದವಳು ನನ್ನನ್ನು ಭಸ್ಸ ಮಾಡಲು ಶಕ್ತಳಾದರೆ ಆಗ ಎಲ್ಲರ ಆಪತ್ತು ಪರಿಹಾರವಾದೀತು. ಅದರಿಂದ ನನ್ನ ಪತಿಗೂ ಮಕ್ಕಳಿಗೂ ಮುಂದೆ ಏನಾದರಾಗಲಿ ಎಂದು ಎಷ್ಟೋಬಾರಿ ಅಂದುಕೊಂಡಿದ್ದೇನೆ. ಆದರೂ ಕಾಲನ ಆಜ್ಞೆಯಂತೆ ನಾನೂ ನನ್ನ ಮಕ್ಕಳಾದ ವ್ಯಾಧಿಗಳೂ ಜೀವಿಗಳನ್ನು ಸೆಳೆದೊಯ್ಯಬೇಕಾಗಿದೆ. ಇದರಲ್ಲಿ ನನ್ನ ತಪ್ಪಿಲ್ಲ. ನನ್ನ ಮಕ್ಕಳಲ್ಲೂ ತಪ್ಪಿಲ್ಲ. ಬೇಕಾದರೆ ಕಾಲನನ್ನೆ ಕೇಳು. ಬಳಿಕ ನಿನಗೆ ಏನು ಯುಕ್ತವೆನಿಸುವುದೋ ಅದನ್ನು ಮಾಡು.'
ಮಾಲಾವತಿ ಕಾಲನನ್ನು ಪ್ರಶ್ನಿಸಿದಳು, “ಹೇ ಭಗವನ್ ಕಾಲ, ನೀನು ನಾರಾಯಣನ ಅಂಶ. ಸನಾತನ, ಕರ್ಮರೂಪ ಮತ್ತು ಕರ್ಮಸಾಕ್ಷಿ, ಪರಾತ್ಪರನಾದ ನಿನಗೆ ನಮಸ್ಕಾರ. ನಾನು ಜೀವಿಸಿರುವಾಗಲೆ ನನ್ನ ಪತಿಯನ್ನೇಕೆ ಸೆಳೆದೊಯ್ದೆ ? ನೀನು ಎಲ್ಲರ ದುಃಖವನ್ನರಿಯಬಲ್ಲ ಸರ್ವಜ್ಞ, ದಯಾನಿಧಿ.'
ಕಾಲ ಹೇಳಿದ, 'ಮಾಲಾವತಿ, ನಿನ್ನ ಪತಿಯನ್ನು ಸೆಳೆದೊಯ್ಯಲು ನಾನಾರು ? ಯಮನಾರು ? ಮೃತ್ಯುಕಸ್ಯೆ ಯಾರು ? ವ್ಯಾಧಿಗಳಾರು ? ನಾವೆಲ್ಲರೂ ಕೃಷ್ಣನ ಆಜ್ಞೆಯಂತೆ ನಡೆಯುವವರು. ಪ್ರಕೃತಿ ಬ್ರಹ್ಮ ವಿಷ್ಣು ಶಿವ ಮುಂತಾದ ದೇವತೆಗಳೂ ಋಷಿಗಳೂ ಮನುಗಳೂ ಮಾನವರೂ ಎಲ್ಲ ಜಂತುಗಳೂ ಆ ಕೃಷ್ಣನ ಆಜ್ಞಾನುವರ್ತಿಗಳೇ, ಅವನ ಪಾದಕಮಲಗಳನ್ನೆ ಜ್ಞಾನಿಗಳಾದ ಯೋಗಿಗಳು ಸದಾ ಧ್ಯಾನಿಸುತ್ತಾರೆ. ಅವನ ಪುಣ್ಯ ನಾಮಗಳನ್ನು ಜಪಿಸುತ್ತಾರೆ.
ಅವನ ಭಯದಿಂದ ಗಾಳಿ ಬೀಸುತ್ತದೆ. ಅವನ ಭಯದಿಂದ ಸೂರ್ಯ ಬೆಳಗುತ್ತಾನೆ. ಅವನಾಜ್ಞೆಯಂತೆ ಬ್ರಹ್ಮ ಸೃಷ್ಟಿ ಮಾಡುತ್ತಾನೆ. ವಿಷ್ಣು ಪಾಲನ ಮಾಡುತ್ತಾನೆ. ರುದ್ರ ಲಯ ಮಾಡುತ್ತಾನೆ.

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |