ಹೊಂಬಣ್ಣದ ನವಿಲು

0:00 0:00

ಹೊಂಬಣ್ಣದ ನವಿಲು

ಬ್ರಹ್ಮದತ್ತನು ಕಾಶೀರಾಜ್ಯವನ್ನು ಆಳುತ್ತಿದ್ದಾಗ ಬೋಧಿಸತ್ವನು ಒಂದುಸಾರಿ ನವಿಲಿನ ಜನ್ಮ ತಾಳಿದನು. ಆ ನವಿಲು ಸರ್ವ ಸಾಧಾರಣ ನವಿಲುಗಳಂತಹುದಲ್ಲ. ಅದೊಂದು ಅಪೂರ್ವವಾದ ಹೊಂಬಣ್ಣದ ನವಿಲು. ಅದು ದಂಡಕಾರಣ್ಯದಲ್ಲಿ ಓಡಾಡಿಕೊಂಡಿತ್ತು.

ಒಂದು ದಿನ ಕಾಶಿರಾಜನ ಪತ್ನಿಯರಲ್ಲಿ ಒಬ್ಬಾಕೆಗೆ ಹೊಂಬಣ್ಣದ ನವಿಲು ಕನಸಿನಲ್ಲಿ ಕಾಣಿಸಿತು. ಅಂತಹುದನ್ನು ತರಿಸಿಕೊಡಬೇಕೆಂದು ಆಕೆ ಗಂಡನನ್ನು ಪೀಡಿಸಿದಳು. ರಾಜನು ಮಂತ್ರಿಯನ್ನು ಕೇಳಿದ. ಆತನು ಬ್ರಾಹ್ಮಣರು ಆ ವಿಷಯ ಬಲ್ಲರೆಂದ. ಬ್ರಾಹ್ಮಣರು ಬೇಟೆಗಾರರಿಗೆ ತಿಳಿದಿರಬಹುದೆಂದು ಹೇಳಿದರು. ರಾಜನು ಒಬ್ಬ ಬೇಟೆಗಾರನನ್ನು ಬರಮಾಡಿಕೊಂಡು 'ಹೊಂಬಣ್ಣದ ನವಿಲನ್ನು ಜೀವಸಹಿತ ಹಿಡಿದುತಂದರೆ ಭಾರಿ ಬಹುಮಾನ ಕೊಡುತ್ತೇನೆ' ಎಂದ. ಆ ಬೇಟೆಗಾರನು ಏಳು ವರ್ಷ ಹೊಂಚುಹಾಕಿದರೂ, ಆ ನವಿಲು ಬಲೆಯಲ್ಲಿ ಬೀಳಲಿಲ್ಲ. ಈ ಮಧ್ಯೆ ಆ ಬೇಟೆಗಾರನೂ ನವಿಲನ್ನು ಬಯಸಿದ ಆ ರಾಣಿಯೂ ತೀರಿಕೊಂಡರು.

'ಕನಸಿನಲ್ಲಿ ಕಾಣಿಸಿದ ಕೇವಲ ಒಂದು ನವಿಲಿಗಾಗಿ ಹಂಬಲಿಸುತ್ತಾ ನನ್ನ ರಾಣಿ ಸಾಯುವುದೆಂದರೇನು?' ಎಂದು ರಾಜನಿಗೆ ಕೋಪ ಬಂತು. ಆಗ ಆತನು ದಂಡಕಾರಣ್ಯದಲ್ಲಿ ಹೊಂಬಣ್ಣದ ನವಿಲೊಂದು ಓಡಾಡಿಕೊಂಡಿರುವುದೆಂತಲೂ, ಅದರ ಮಾಂಸವನ್ನು ತಿಂದವರಿಗೆ ಸಾವು ನೋವುಗಳಿರುವುದಿಲ್ಲವೆಂತಲೂ ಒಂದು ಪ್ರಕಟನೆಯನ್ನು ಮಹಾದ್ವಾರದ ಮುಂದೆ ನೇತುಹಾಕಿಸಿದ.

ಆ ರಾಜನ ನಂತರ ಚಿನ್ನದ ಬಣ್ಣದ ನವಿಲನ್ನು ತರುವ ಪ್ರಯತ್ನದಲ್ಲಿಯೇ ಆರು ತಲೆಮಾರುಗಳು ಕಳೆದುಹೋದವು. ಏಳನೆಯವನಿಗೆ ಮಾತ್ರ ಅದು ದಕ್ಕಿತು. ಅವನು ಕಳುಹಿಸಿದ ಬೇಟೆಗಾರನು ಬಹು ಯುಕ್ತಿಯಿಂದ ಆ ನವಿಲನ್ನು ಹಿಡಿದುತಂದು ರಾಜನಿಗೆ ಒಪ್ಪಿಸಿದ. ಆ ನವಿಲನ್ನು ನೋಡಿದಾಕ್ಷಣ ರಾಜನಿಗೆ ಅಮಿತಾಶ್ಚರ್ಯವೂ ಪೂಜ್ಯಭಾವವೂ ಉಂಟಾಯಿತು. ತನ್ನ ಸಿಂಹಾಸನದ ಪಕ್ಕದಲ್ಲಿಯೇ ಆ ಮಯೂರಕ್ಕಾಗಿ ಒಂದು ಉಚಿತಾಸನವನ್ನು ಹಾಕಿಸಿದ. ನವಿಲಿನ ರೂಪದಲ್ಲಿದ್ದ ಬೋಧಿಸತ್ವನು ರಾಜನನ್ನು ಕುರಿತು 'ಎಲೈ ರಾಜನೇ, ನನ್ನನ್ನು ಹೀಗೆ ಬಂಧಿಸಲು ಕಾರಣವೇನು?' ಎಂದು ಕೇಳಿದ.

'ನಿನ್ನ ಮಾಂಸವನ್ನು ತಿಂದರೆ ಸಾವು ನೋವುಗಳಿರುವುದಿಲ್ಲವೆಂದು ಹೇಳುತ್ತಿರುವರು' ಎಂದ ರಾಜ. 'ಅಂದರೆ ನನ್ನನ್ನು ಕೊಲ್ಲಲು ನಿರ್ಧರಿಸಿದಂತಾಯಿತು,' ಎಂದು ಗಂಭೀರವಾಗಿ ನುಡಿದ ಬೋಧಿಸತ್ವ. 'ಹೌದು' ರಾಜನ ಉತ್ತರವಿದು.

'ಹುಚ್ಚನೇ! ನನಗೆ ಮರಣ ಸಂಭವಿಸುವಾಗ ನನ್ನ ಮಾಂಸವನ್ನು ತಿನ್ನುವವರಿಗೆ ಮರಣ ಸಂಭವಿಸುವುದಿಲ್ಲವೆಂದರೇನು? ಇದರಲ್ಲಿ ಏನಾದರೂ ಅರ್ಥವಿದೆಯೇ?' ಎಂದು ಕೇಳಿದ ಬೋಧಿಸತ್ವ. 'ನಿನ್ನದು ಹೊಂಬಣ್ಣದ ಶರೀರ. ಆದುದರಿಂದ ನಿನ್ನ ಮಾಂಸವನ್ನು ತಿಂದವರಿಗೆ ಆ ಬಣ್ಣ ಬರುವುದೆಂದೂ, ಅವರಿಗೆ ಸಾವೇ ಇರಲಾರೆಂದೂ ಹೇಳುತ್ತಿರುವರು,' ಎಂದು ರಾಜನು ತೀರ ವಿವರವಾಗಿ ಹೇಳಿದ.

'ರಾಜನೇ, ನಾನು ಹೀಗಿರಲು ಕಾರಣ ಹೇಳುವೆನು ಕೇಳು. ಪೂರ್ವಕಾಲದಲ್ಲಿ ಒಮ್ಮೆ ನಾನು ಇದೇ ರಾಜ್ಯಕ್ಕೆ ಮಹಾರಾಜನಾಗಿದ್ದೆ. ನ್ಯಾಯವಾಗಿ ರಾಜ್ಯವನ್ನಾಳಿ, ಧರ್ಮಸ್ಥಾಪನೆ ಮಾಡಿದೆ. ಆದುದರಿಂದ ನಾನು ಈ ಜನ್ಮದಲ್ಲಿ ಹೊಂಬಣ್ಣದ ನವಿಲಾಗಿ ಜನಿಸಿರುವೆನು,' ಎಂದು ಹೇಳಿದ ಬೋಧಿಸತ್ವ. ಕಾಶಿರಾಜನು ವಿಸ್ಮಯಗೊಂಡನು. 'ಏನು! ಧರ್ಮವಾಗಿ ಆಳಿದ್ದಕ್ಕೆ ಈ ಫಲವೇ? ನಿನ್ನ ಮಾತನ್ನು ನಂಬುವುದು ಹೇಗೆ?'

'ಆಗ ನಾನೊಂದು ದಿವ್ಯರಥದಲ್ಲಿ ವಿಹರಿಸುತ್ತಿದ್ದೆ. ಈಗ ಅದು ರಾಜೋದ್ಯಾನದಲ್ಲಿರುವ ಕೊಳದ ಬಳಿ ಹೂತುಹೋಗಿದೆ. ಅಗಿಯಿಸಿ ನೋಡಿ' ಎಂದ. ಅಪ್ರಕಾರವೇ ಅಗಿಯಿಸಿ ನೋಡಲು ದಿವ್ಯರಥವೊಂದು ಕಾಣಿಸಿತು. ಅಂದಿನಿಂದ ರಾಜನು ಬೋಧಿಸತ್ವನನ್ನು ತನ್ನ ಗುರುವಿನಂತೆ ಕಾಣುತ್ತಾ ಬಂದನು.

ಕನ್ನಡ

ಕನ್ನಡ

ಮಕ್ಕಳಿಗಾಗಿ

Click on any topic to open

0

Copyright © 2026 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize

We use cookies