ಎಷ್ಟು ಸಾಹಸವಂತ ನೀನೇ ಬಲವಂತ

ಎಷ್ಟು ಸಾಹಸವಂತ ನೀನೇ ಬಲವಂತ
ದಿಟ್ಟ ಮೂರುತಿ ಭಳಿರೇ ಭಳಿರೇ ಹನುಮಂತ

ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ
ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ

ಚರಣಗಳು:
ರಾಮರಪ್ಪಣೆಯಿಂದ ಶರಧಿಯ ದಾಟಿ
ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದೆ
ಈ ಮಹಿಯೊಳು ನಿನಗಾರೈ ಸಾಟಿ

ದೂರದಿಂದಸುರನ ಪುರವನೆ ನೋಡಿ
ಭರದಿ ಶ್ರೀರಾಮರ ಸ್ಮರಣೆಯ ಮಾಡಿ
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು
ವಾರಿಜಮುಖಿಯನು ಕಂಡು ಮಾತಾಡಿ ॥ಎಷ್ಟು ಸಾಹಸವಂತ॥

ರಾಮರ ಕ್ಷೇಮವ ರಮಣಿಗೆ ಪೇಳಿ
ತಾಮಸ ಮಾಡದೆ ಮುದ್ರಿಕೆ ನೀಡಿ
ಪ್ರೇಮದಿ ಜಾನಕಿ ಕುರುಹನು ಕೊಡಲಾಗ
ಆ ಮಹಾವನದೊಳು ಫಲವನು ಬೇಡಿ

ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
ಬಣ್ಣಿಸಿ ಅಸುರರ ಬಲವನು ಮುರಿದು ॥ಎಷ್ಟು ಸಾಹಸವಂತ॥

ಶೃಂಗಾರ ವನದೊಳಗೆ ಇದ್ದ ರಕ್ಕಸರ
ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಯ ಕುವರನ
ಭಂಗಿಸಿ ಬಿಸುಟೆಯೋ ಬಂದ ರಕ್ಕಸರ

ದೂರು ಪೇಳಿದರೆಲ್ಲಾ ರಾವಣನೊಡನೆ
ಚೀರುತ ಕರೆಸಿದ ಇಂದ್ರಜಿತುವನೆ
ಚೋರಕಪಿಯ ನೀ ಹಿಡಿತಹುದೆನ್ನುತ
ಶೂರರ ಕಳುಹಿದ ನಿಜಸುತನೊಡನೆ ॥ಎಷ್ಟು ಸಾಹಸವಂತ॥


ಪಿಡಿದನು ಇಂದ್ರಜಿತು ಕಡು ಕೋಪದಿಂದ
ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
ನಡೆದನು ಲಂಕೆಯ ಒಡೆಯನಿದ್ದೆಡೆಗೆ

ಕಂಡನು ರಾವಣನುದ್ದಂಡಕಪಿಯನು
ಮಂಡೆಯ ತೂಗುತ ಮಾತಾಡಿಸಿದನು
ಭಂಡು ಮಾಡದೆ ಬಿಡೆನೋಡು ಕಪಿಯನೆ
ಗಂಡುಗಲಿಯು ದುರುದುರಿಸಿ ನೋಡಿದನು ॥ಎಷ್ಟು ಸಾಹಸವಂತ॥

ಛಲವ್ಯಾಕೋ ನಿನಗಿಷ್ಟು ಎಲವೋ ಕೊಡಗನೆ
ನೆಲೆಯಾವುದು ಹೇಳೋ ನಿನ್ನೊಡೆಯನೆಸರನ್ನು
ಬಲವಂತ ರಾಮರ ಬಂಟ ಬಂದಿಹೆನೋ
ಹಲವು ಮಾತ್ಯಾಕೋ ಹನುಮನು ನಾನೇ

ಬಡ ರಾವಣನೆ ನಿನ್ನ ಬಡಿದು ಹಾಕುವೆನೋ
ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ
ಹುಡಿಯೇಳಿಸುವೆನೋ ಖೂಳ ರಕ್ಕಸರನೆ
ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ಎಷ್ಟು ಸಾಹಸವಂತ॥

ನಿನ್ನಂಥ ದೂತರು ರಾಮನ ಬಳಿಯೊಳು
ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ
ನನ್ನಂಥ ದೂತರು ನಿನ್ನಂಥ ಪ್ರೇತರು
ಇನ್ನೂರು ಮುನ್ನೂರು ಕೋಟಿ ಕೇಳರಿಯಾ

ಕಡು ಕೋಪದಿಂದಲಿ ಖೂಳ ರಾವಣನು
ಸುಡಿರೆಂದ ಬಾಲವ ಸುತ್ತಿ ವಸನವ
ಒಡೆಯನ ಮಾತಿಗೆ ತಡೆಬಡೆ ಇಲ್ಲದೆ
ಒಡನೆ ಮುಟ್ಟಿದರು ಗಡಿಮನೆಯವರು ॥ಎಷ್ಟು ಸಾಹಸವಂತ॥

ತಂದರು ವಸನವ ತಂಡತಂಡದಲಿ
ಒಂದೊಂದು ಮೂಟೆ ಎಂಭತ್ತು ಕೋಟಿಯಲ್ಲಿ
ಚಂದದಿ ಹರಳಿನ ತೈಲದೊಳದ್ದಿಸಿ
ನಿಂದ ಹನುಮನು ಬಾಲವ ಬೆಳೆಸುತ

ಶಾಲು ಸಕಲಾತಿಯು ಸಾಲದೆಯಿರಲು
ಬಾಲೇರ ವಸ್ತ್ರವ ಸೆಳೆದು ತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
ಕಾಲಮೃತ್ಯುವ ಕೆಣಕಿದರಲ್ಲಿ ॥ಎಷ್ಟು ಸಾಹಸವಂತ॥

ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
ಇಣುಕಿನೋಡುತ ಅಸುರರನಣಕಿಸುತ
ಝಣಝಣಝಣರೆನೆ ಬಾಲದ ಗಂಟೆಯು
ಮನದಿ ಶ್ರೀ ರಾಮರ ಪಾದವ ನೆನೆಯುತ

ಮಂಗಳಂ ಶ್ರೀ ರಾಮಚಂದ್ರ ಮೂರುತಿಗೆ
ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯಸುಟ್ಟು
ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ಎಷ್ಟು ಸಾಹಸವಂತ॥

ಹೊತ್ತಿತು ಅಸುರನ ಗಡ್ಡ ಮೀಸೆಗಳು
ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿ ರಾಮರು ಕೋಪಿಸುವರು ಎಂದು
ಚಿತ್ರದಿ ನಡೆದನು ಅರಸನಿದ್ದೆಡೆಗೆ

ಸೀತೆಯ ಕ್ಷೇಮವ ರಾಮರಿಗ್ಹೇಳಿ
ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
ಸೇತುವೆ ಕಟ್ಟಿ ಚತುರಂಗ ಬಲಸಹ
ಮುತ್ತಿತು ಲಂಕೆಯ ಸೂರೆಗೈಯ್ಯುತಲಿ ॥ಎಷ್ಟು ಸಾಹಸವಂತ॥

ವೆಗ್ಗಳವಾಯಿತು ರಾಮರ ದಂಡು
ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ
ಜಗ್ಗನೆ ಪೇಳ್ದರು ರಾವಣಗಂದು

ರಾವಣ ಮೊದಲಾದ ರಾಕ್ಷಸರ ಕೊಂದು
ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡು ಅಯೋಧ್ಯದಿ
ದೇವ ಶ್ರೀ ರಾಮರು ರಾಜ್ಯವಾಳಿದರು ॥ಎಷ್ಟು ಸಾಹಸವಂತ॥

ಶಂಖದೈತ್ಯನ ಕೊಂದೆ ಶರಣು ಶರಣಯ್ಯ
ಶಂಖಗಿರಿಯಲಿ ನಿಂದ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ
ಬಿಂಕದಿ ಪಡೆದೆಯೋ ಅಜನಪದವಿಯ ॥ಎಷ್ಟು ಸಾಹಸವಂತ॥

68.5K
22.4K

Comments

n6t4e
ಈ ಹಾಡನ್ನು ದಿನಕ್ಕೆ ಒಮ್ಮೆಯಾದರು ಕೇಳಿದರೆ ಮನಸ್ಸಿಗೆ ಸಮಾಧಾನ ದೊರೆಯುತ್ತದೆ -Nagaraaj Shetty

ತುಂಬಾ ಅರ್ಥ ಗರ್ಬಿತವಾದ ಗೀತೆ ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೆಳಬೇಕು ಅಂತಾ ಅನ್ಸುತ್ತೆ Dr. ವಿದ್ಯಾ ಭೂಷಣ್ ಸರ್ ಅವರಿಗೇ ಹೃದಯ ಪೂರ್ವಕ ವಂದನೆಗಳು 😌😌😌 -Yamini

ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

Read more comments

ವೇದವ್ಯಾಸರ ತಂದೆ ತಾಯಿಯವರು ಯಾರು?

ವೇದವ್ಯಾಸರ ತಂದೆ ಪರಾಶರ ಮುನಿ ಮತ್ತು ತಾಯಿ ಸತ್ಯವತಿಯವರು.

ಮಹಾಭಾರತದ ಕಥೆಯ ಪ್ರಕಾರ ಗಾಂಧಾರಿಗೆ ನೂರು ಜನ ಪುತ್ರರು ಹೇಗೆ ಸಿಕ್ಕರು?

ಗಾಂಧಾರಿ ಋಷಿ ವ್ಯಾಸರಿಂದ ನೂರು ಶಕ್ತಿಶಾಲಿ ಪುತ್ರರಿಗೆ ವರವನ್ನು ಕೋರಿದಳು. ವ್ಯಾಸರ ಆಶೀರ್ವಾದವು ಅವಳ ಗರ್ಭಾವಸ್ಥೆಗೆ ಕಾರಣವಾಯಿತು, ಆದರೆ ಅವಳು ದೀರ್ಘಾವಧಿಯ ಗರ್ಭಾವಸ್ಥೆಯನ್ನು ಎದುರಿಸಿದಳು. ಕುಂತಿಯ ಮಗ ಹುಟ್ಟಿದಾಗ ಗಾಂಧಾರಿ ಹತಾಶಳಾಗಿ ಅವಳ ಹೊಟ್ಟೆಗೆ ಹೊಡೆದುಕೊಂಡಳು. ಆಗ ಅವಳ ಹೊಟ್ಟೆಯಿಂದ ಒಂದು ದೊಡ್ಡ ಮಾಂಸದ ಮುದ್ದೆ ಹೊರಬಂದಿತು. ಆಗ ವ್ಯಾಸರು ಬಂದು, ಕೆಲವು ವಿಧಿವಿಧಾನಗಳನ್ನು ನೆರವೇರಿಸಿ, ಒಂದು ವಿಶಿಷ್ಟ ಪ್ರಕ್ರಿಯೆಯ ಮೂಲಕ, ಆ ಮುದ್ದೆಯನ್ನು ನೂರು ಗಂಡು ಮಕ್ಕಳು ಮತ್ತು ಒಂದು ಹೆಣ್ಣುಮಗಳಾಗಿ ಪರಿವರ್ತಿಸಿದರು. ಈ ಕಥೆಯು ಸಾಂಕೇತಿಕತೆಯಿಂದ ಸಮೃದ್ಧವಾಗಿದೆ, ತಾಳ್ಮೆ, ಹತಾಶೆ ಮತ್ತು ದೈವಿಕ ಹಸ್ತಕ್ಷೇಪದ ಶಕ್ತಿಯ ವಿಷಯಗಳನ್ನು ಎತ್ತಿ ತೋರಿಸುತ್ತದೆ. ಇದು ಮಾನವ ಕ್ರಿಯೆಗಳು ಮತ್ತು ದೈವಿಕ ಇಚ್ಛೆಯ ನಡುವಿನ ಪರಸ್ಪರ ಕ್ರಿಯೆಯನ್ನು ತೋರಿಸುತ್ತದೆ

Quiz

ಯಜ್ಞಗಳಲ್ಲಿ "ಹೋತ" ಎಂಬ ಪುರೋಹಿತರು ಯಾವ ವೇದಶಾಖೆಯವರು?
Copyright © 2024 | Vedadhara | All Rights Reserved. | Designed & Developed by Claps and Whistles
| | | | |